ಏರುಮುಖ ಪ್ರತಿಫಲ ಸೂತ್ರ (ಲಾ ಆಫ್ ಇನ್ಕ್ರೀಸಿಂಗ್ ರಿಟರ್ನ್ಸ್ : ಉತ್ಪಾದನೆಯಲ್ಲಿ ತೊಡಗಿಸಲಾಗುವ ಅಂಗಗಳ ಪೈಕಿ ಒಂದನ್ನೋ ಹಲವನ್ನೋ ಸ್ಥಿರವಾಗಿರಿಸಿ ಉಳಿದ ಅಂಗವನ್ನು ಅಥವಾ ಅಂಗಗಳನ್ನು ಸ್ಥಿರವಾದ ಅಂಗಗಳೊಂದಿಗೆ ಹೆಚ್ಚುಹೆಚ್ಚಾಗಿ ಸಂಯೋಜಿಸಿದಾಗ, ಹೀಗೆ ಅಧಿಕವಾಗಿ ತೊಡಗಿಸಿದ ಅಂಗ ಅಥವಾ ಅಂಗಗಳಿಂದ ದೊರಕುವ ಪ್ರತಿಫಲ ಅಥವಾ ಉತ್ಪತ್ತಿ ಒಂದು ಘಟ್ಟದವರೆಗೂ ಏರುಗತಿಯಲ್ಲಿ ಹೆಚ್ಚುತ್ತಿರುತ್ತದೆ. ಉತ್ಪಾದನೆಯ ಎಲ್ಲ ಅಂಶಗಳನ್ನೂ ಹೆಚ್ಚಿಸಿದಾಗಲೂ-ಎಂದರೆ ಈ ಉತ್ಪಾದನಾಂಗಗಳ ನಡುವಣ ಪ್ರಮಾಣಗಳನ್ನು ಹೆಚ್ಚು ಕಡಿಮೆ ಮಾಡದೆ ಎಲ್ಲವನ್ನೂ ಒಟ್ಟಿಗೆ ಹೆಚ್ಚಿಸಿದಾಗಲೂ (ಉದಾಹರಣೆಗೆ, ಅವನ್ನು ಇಮ್ಮಡಿಸಿದಾಗ, ಮುಮ್ಮಡಿಸಿದಾಗ)-ಅವುಗಳ ಇಡೀ ಗಾತ್ರವನ್ನೇ ವಿಸ್ತರಿಸಿದಾಗಲೂ-ಪ್ರತಿಫಲ ಹೆಚ್ಚಬಹುದು. ಈ ಎರಡೂ ಸಂದರ್ಭಗಳಲ್ಲಿ ಸಂಭವಿಸುವ ಏರುಮುಖ ಪ್ರತಿಫಲ ಪ್ರವೃತ್ತಿಯ ವಿವೇಚನೆಯೇ ಏರುಮುಖ ಪ್ರತಿಫಲಸೂತ್ರ (ಲಾ ಆಫ್ ಇನ್ಕ್ರೀಸಿಂಗ್ ರಿಟರ್ನ್ಸ್).

ಉತ್ಪಾದನಾಂಗಗಳ ಪರಸ್ಪರ ಪ್ರಮಾಣಗಳನ್ನು ವ್ಯತ್ಯಾಸ ಮಾಡಿದಾಗ ಅವುಗಳಿಂದ ಪ್ರತಿಫಲದ ಮೇಲಾಗುವ ಪರಿಣಾಮಗಳನ್ನು ಪ್ರತಿಫಲ ಸೂತ್ರಗಳೆಂದು ಪರಿಗಣಿಸುವುದು ವಾಡಿಕೆಯಾಗಿ ಬಂದಿದೆ. ಎಲ್ಲಿಯವರೆಗೆ ಈ ಉತ್ಪಾದನಾಂಗಗಳ ಪರಸ್ಪರ ಸಂಯೋಜನೆ ಪರಮಾವಧಿ ಮುಟ್ಟಿರುವುದಿಲ್ಲವೋ ಅಲ್ಲಿಯವರೆಗೆ ಇವುಗಳ ಪ್ರಮಾಣಗಳ ವ್ಯತ್ಯಾಸದಿಂದ ಪ್ರತಿಫಲವೂ ಏರುಗತಿಯಲ್ಲೇ ಏರುತ್ತಿರುತ್ತದೆ. ಅಲ್ಲಿಂದಾಚೆಗೆ ಉತ್ಪಾದನಾಂಗಗಳಲ್ಲಿ ಯಾವುದೊಂದನ್ನು ಹೆಚ್ಚಿಸಿದರೂ ಈ ಹೆಚ್ಚಿನ ಘಟಕದಿಂದಾಗಿ ದೊರಕುವ ಪ್ರತಿಫಲ ಹಿಂದಿನ ಘಟಕದ ಪ್ರತಿಫಲಕ್ಕಿಂತ ಹೆಚ್ಚಾಗಿರುವುದು ಸಾಧ್ಯವಿಲ್ಲ. ಇದು ಸ್ಥಿರವಾಗಿಯೇ ಮುಂದುವರಿಯಬಹುದು; ಅಥವಾ ಇಳಿಮುಖವಾಗಬಹುದು. ಆದ್ದರಿಂದ ವಿವೇಕಿಯಾದ ಉತ್ಪಾದಕ ಈ ಘಟ್ಟದಲ್ಲಿ ನಾನಾ ಉತ್ಪಾದನಾಂಗಗಳ ಪರಸ್ಪರ ಪ್ರಮಾಣಗಳನ್ನು ವ್ಯತ್ಯಾಸಗೊಳಿಸುವ ಪ್ರಯತ್ನವನ್ನು ಸ್ಥಗಿತಗೊಳಿಸುತ್ತಾನೆ. ಉತ್ಪಾದನೆಯ ಈ ಗಾತ್ರಕ್ಕೆ ಇದೇ ಪರಮಾವಧಿಯ ಸ್ಥಿತಿ.
ಒಂದು ಉದ್ಯಮದ ಉತ್ಪಾದನೆಯ ಏರುಮುಖ, ಇಳಿಮುಖ ಮತ್ತು ಸ್ಥಿರ ಪ್ರವೃತ್ತಿಗೆ ಸಂಬಂಧಿಸಿದಂತೆ ಕ್ರಮವಾಗಿ ಏರುಮುಖ, ಇಳಿಮುಖ ಮತ್ತು ಸ್ಥಿರ ಪ್ರತಿಫಲ ಸೂತ್ರಗಳೆಂಬ ಮೂರುಸೂತ್ರಗಳನ್ನು ಪ್ರತಿಪಾದಿಸುವುದು ಅರ್ಥಶಾಸ್ತ್ರಜ್ಞ,ರಲ್ಲಿ ರೂಢಿಯಾಗಿ ಬಂದಿದೆ. ಆದರೆ ಉತ್ಪಾದನಾಂಗಗಳ ವ್ಯತ್ಯಾಸದಿಂದ ಪ್ರತಿಫಲಿಸುವ ಈ ಮೂರೂ ಪ್ರವೃತ್ತಿಗಳನ್ನೂ ಚರ ಅನುಪಾತ ಸೂತ್ರವೆಂಬ (ಲಾ ಆಫ್ ವೇರಿಯಬಲ್ ಪ್ರಪೋರ್ಷನ್ಸ್‌) ಒಂದೇ ಸೂತ್ರದ ಮೂರು ಮುಖಗಳೆಂದು ಪರಿಗಣಿಸುವುದು ಹೆಚ್ಚು ಸಮಂಜಸವೆಂಬುದಾಗಿ ವಾದಿಸಲಾಗಿದೆ. 

ಉತ್ಪಾದನ ಕಾರ್ಯದಲ್ಲಿ ಪ್ರಕೃತಿಯ ಕೈವಾಡ ಎಲ್ಲಿ ಅಧಿಕವಾಗಿದೆಯೋ ಅಲ್ಲಿ ಇಳಿಮುಖ ಪ್ರತಿಫಲ ಪ್ರವೃತ್ತಿ ಪ್ರಬಲವಾಗಬಹುದೆಂದೂ (ಉದಾಹರಣೆ : ಕೃಷಿ) ಮಾನವನ ಕೈ ಎಲ್ಲಿ ಮೇಲೋ ಅಲ್ಲಿ ಏರುಮುಖ ಪ್ರತಿಫಲ ಪ್ರವೃತ್ತಿ ಹೆಚ್ಚು ಪ್ರಬಲವೆಂದೂ (ಉದಾಹರಣೆ: ಕೈಗಾರಿಕೆ) ಮಾರ್ಷಲ್ ಹೇಳಿದ್ದಾನೆ. ಒಟ್ಟಿನಲ್ಲಿ ಉತ್ಪಾದನಾಂಗಗಳ ಅಧಿಕ ನಿಯೋಜನೆಯಿಂದ ಅದರ ಅನುಪಾತಕ್ಕಿಂತ ಅಧಿಕ ಪ್ರತಿಫಲ ದೊರಕಿದಾಗ ಏರುಮುಖ ಪ್ರತಿಫಲ ಸೂತ್ರದ ಪ್ರಭಾವವಿದೆಯೆಂದು ಹೇಳಬಹುದು. ವೆಚ್ಚದ ದೃಷ್ಟಿಯಿಂದ ಹೇಳುವುದಾದರೆ,  ಏರುಮುಖ ಪ್ರತಿಫಲ ಪ್ರವೃತ್ತಿಯಿದ್ದಾಗ ಅಂಚಿನ ಘಟಕದ ವೆಚ್ಚ ಕಡಿಮೆಯಾಗುವ ಪ್ರವೃತ್ತಿಯಿರುತ್ತದೆ. ಉತ್ಪಾದನೆ ಹೆಚ್ಚಿದಂತೆಲ್ಲ ಉತ್ಪನ್ನದ ಬೆಲೆ ಇಳಿಯುತ್ತಿದ್ದ ಪಕ್ಷದಲ್ಲಿ ಏರುಮುಖ ಪ್ರತಿಫಲ ಸೂತ್ರವಿದೆಯೆಂದು ತಿಳಿಯತಕ್ಕದ್ದು.

ಏರುಮುಖ ಪ್ರತಿಫಲ ಅಥವಾ ಇಳಿಮುಖ ವೆಚ್ಚಕ್ಕೆ ಅನೇಕ ಕಾರಣಗಳುಂಟು. ಉತ್ಪಾದನೆಯ ಗಾತ್ರ ವಿಸ್ತರಿಸಿದಂತೆ ವಿಶೇಷಜ್ಞತೆ ಅಥವಾ ಶ್ರಮ ವಿಭಜನೆಯನ್ನ ನುಸರಿಸಲು ಅವಕಾಶ ಕಲ್ಪಿತವಾಗುವುದು. ಕಾರ್ಮಿಕರನ್ನು ಅಧಿಕ ಸಂಖ್ಯೆಯಲ್ಲಿ ನಿಯಮಿಸಿದಂತೆಲ್ಲ ಕಾರ್ಯಭಾರವನ್ನು ವಿಭಜಿಸಿ ಪ್ರತಿ ಕಾರ್ಯವನ್ನೂ ವಿಶೇಷಜ್ಞನಾದ ಕಾರ್ಮಿಕನಿಗೆ ವಹಿಸಿಕೊಡಲು ಅನುಕೂಲವಾಗುತ್ತದೆ. ಇದರಿಂದ ಕಾರ್ಯದಕ್ಷತೆ ಅಧಿಕಗೊಂಡು ಉತ್ಪನ್ನ ಅಧಿಕ ಪ್ರಮಾಣದಲ್ಲಿ ವೃದ್ಧಿಗೊಳ್ಳಲು ಸಾಧ್ಯವಾಗುವುದು. ಎರಡನೆಯದಾಗಿ, ಉತ್ಪಾದನೆಯ ಗಾತ್ರ ಕೆಳಮಟ್ಟದ್ದಾಗಿದ್ದಾಗ ಕಾರ್ಖಾನೆಯಲ್ಲಿ ತಯಾರಾಗುವಂಥ ಹಲವು ರೀತಿಯ ಸಾಮಗ್ರಿಗಳು ಸಾಧನಗಳ ಅಭಾವದ ಕಾರಣದಿಂದ ವ್ಯರ್ಥವಾಗುವ ಸಂಭವವಿರುತ್ತದೆ. ಆದರೆ ಉತ್ಪಾದನ ಶ್ರೇಣಿ ವಿಸ್ತಾರಗೊಂಡಂತೆ ಅಂಥ ಸಾಮಗ್ರಿಗಳು ವ್ಯರ್ಥವಾಗದಂತೆ ಅವುಗಳಿಂದ ಉಪವಸ್ತುಗಳನ್ನು ನಿರ್ಮಿಸಿ ಉತ್ಪತ್ತಿಯ ಸರಾಸರಿ ವೆಚ್ಚವನ್ನು ಕಡಿಮೆಮಾಡುವ ಸಾಧ್ಯತೆಯಿರುತ್ತದೆ. ಅಲ್ಲದೆ ಪ್ರತಿಫಲವನ್ನು ಅಧಿಕಗೊಳಿಸುವ ಕಾರಣಗಳು ಸಾಮಾನ್ಯವಾಗಿ ಆಯಾಮಿಕ (ಡೈಮೆನ್ಷನಲ್) ಸಂಬಂಧವುಳ್ಳವು. ಉದಾಹರಣೆಗೆ, ತಲಾ 1 ಮೀ ಬದಿ  ಇರುವ ಪೆಟ್ಟಿಗೆಯಲ್ಲಿ ಹಿಡಿಸುವುದರ 27ರಷ್ಟು ವಸ್ತುಗಳು ತಲಾ 3 ಮೀ ಬದಿ ಇರುವ ಪೆಟ್ಟಿಗೆಯಲ್ಲಿ ಹಿಡಿಸುತ್ತವೆ. ಆದರೆ ದೊಡ್ಡ ಪೆಟ್ಟಿಗೆಯನ್ನು ತಯಾರುಮಾಡಲು ಚಿಕ್ಕದಕ್ಕೆ ಬೇಕಾಗುವ ಒಂಬತ್ತರಷ್ಟು ಹಲಗೆ ಆದರೆ ಸಾಕು. ಹಾಗೆಯೆ 200 ಟನ್ನಿನ ಧಾರಣಶಕ್ತಿಯಿರುವ ಐದು ಕುಲುಮೆಗಳನ್ನು ಕಟ್ಟಲು 1,000 ಟನ್ನಿನ ಧಾರಣಶಕ್ತಿಯಿರುವ ಒಂದೇ ಕುಲುಮೆ ಕಟ್ಟುವುದಕ್ಕಿಂತ ಸರಾಸರಿಯಲ್ಲಿ ಅಧಿಕ ವೆಚ್ಚ ಬೀಳುತ್ತದೆ. ಉತ್ಪಾದನೆಯ ಕೆಳಶ್ರೇಣಿಯಿಂದ ಉನ್ನತ ಶ್ರೇಣಿಗಳಿಗೆ ಹೋದಂತೆಲ್ಲ ಉದ್ಯಮಿಗೆ ಮೇಲೆ ಹೇಳಿದ ಕೆಲವು ಅನುಕೂಲಗಳು ಲಭಿಸುತ್ತವೆ. ಇವು ಆಂತರಿಕ ಅನುಕೂಲಗಳು ಅಥವಾ ಮಿತವ್ಯಯಗಳು. ಇವುಗಳ ಜೊತೆಗೆ ಕೆಲವು ಬಾಹ್ಯ ಅನುಕೂಲಗಳು ಲಭಿಸುವುದುಂಟು (ಉದಾಹರಣೆ: ಸಾಗಣೆ ವೆಚ್ಚ, ವಿದ್ಯುಚ್ಚಕ್ತಿ, ಸಾಮಗ್ರಿಯ ಸಂಗ್ರಹಣ ಮತ್ತು ಮಾರುಕಟ್ಟೆಯ ವೆಚ್ಚಗಳಲ್ಲಿ ರಿಯಾಯಿತಿ). 

ಕೈಗಾರಿಕೆ ವಿಸ್ತಾರಗೊಂಡಂತೆ ಹಲವು ಪುರಕ ಕಾರ್ಖಾನೆಗಳು ಬೆಳೆದು ಸಲಕರಣೆ, ಕಚ್ಚಾಸಾಮಗ್ರಿ ಮೊದಲಾದ ಈ ಕೈಗಾರಿಕೆಗಳಿಗೆ ಕಡಿಮೆ ದರಗಳಲ್ಲಿ ಒದಗಬಹುದು. ಈ ಎಲ್ಲ ವೆಚ್ಚಗಳ ಇಳಿತದಿಂದಾಗಿ ಉತ್ಪನ್ನದ ಆಂಶಿಕ ವೆಚ್ಚವೂ ಇಳಿಯುವುದು ಸಹಜ (ನೋಡಿ- ಬೃಹದ್ಗಾತ್ರ-ಉತ್ಪಾದನೆ; ಗಾತ್ರಾನುಗುಣ-ಪ್ರತಿಫಲ).						  	 (ಎಬಿ.ಎ.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ